ಶಂಕರಾನಂದ ಹೆಬ್ಬಾಳ-ಗಝಲ್

ಮೊದಲೆ ಹೇಳಿಬಿಡಬೇಕಿತ್ತು ಇದೊಂದು ನಾಟಕವೆಂದು
ಹೃದಯ ತಿಳಿಯಬೇಕಿತ್ತು ಪ್ರೀತಿಯೊಂದು ಮೋಹವೆಂದು

ತುಟಿಗಳು ಕಂಪಿಸದೆ ದಿಗಿಲು ಬಡಿದು ಕುಳಿತಿವೆಯೇಕೆ
ನುಡಿಯ ಅರಿಯಬೇಕಿತ್ತು ಸದರವೊಂದು ಕಾರಣವೆಂದು

ಗೋಪುರ ಗಂಟೆಯಂತೆ ಘೋಷಧ್ವನಿ ಮೊಳಗಿತೇಕೆ
ಕಂಗಳು ನಂಬಬೇಕಿತ್ತು ಕಾಣವುದು ಮುಖವಾಡವೆಂದು

ವಿಶ್ವಾಸದ ನೆಪದಲ್ಲಿ ಕೃತಘ್ನತೆಯನ್ನು ಮೆರೆವೆಯಲ್ಲ
ಬಂಧವನು ತೊರೆಯಬೇಕಿತ್ತು ಸುಖವು ಇನ್ನಿಲ್ಲವೆಂದು

ಭಾವಗುಚ್ಚದಲಿ ಅಭಿನವನ ಕುಸುಮವಿದು ಬಾಡಲಿಲ್ಲ
ಮೌನವು ಬೆರೆಯಬೇಕಿತ್ತು ಜೀವವದು ತಾನಿಲ್ಲವೆಂದು